ಗೀತಾದರ್ಶನ – Message of Gita (Kannada)

ಗೀತಾದರ್ಶನ

(Thanks to Rajath and Adarsh for translating this.)

ಸನಾತನ (ಹಿಂದೂ) ಧರ್ಮದ ಬುನಾದಿಯಾಗಿರುವ ವೇದಗಳ ಸಾರಾಂಶವೇ ಶ್ರೀಮದ್-ಭಗವದ್ಗೀತೆ. ಗೀತೆಯ ಸಂದೇಶವೇ ವೇದಗಳ ಸಂದೇಶ. ಅದುವೇ ಹಿಂದೂ ಧರ್ಮದ ಸಾರ.

ಜೀವನದ ಉದ್ದೇಶವು:‌ “ಆನಂದದಿಂದ ಇರುವುದು ಮತ್ತು ಪರರಿಗೆ ಸಹಕಾರಿಯಾಗಿರುವುದು.’ ಉತ್ತಮ ಜೀವ ನಡೆಸುವುದು ಮತ್ತು ಉತ್ತಮ ಕಾರ್ಯಗಳಿಂದ ಮಾತ್ರ ಈ ಗುರಿಯನ್ನು ತಲುಪಲು ಸಾಧ್ಯ.

ಜೀವನದ ಗುರಿ

ಜೀವನದಲ್ಲಿ ಯಾವುದೇ ಸಂದರ್ಭ ಒದಗಿದಾಗಲೂ ಆನಂದದಿಂದಿರುವ ಸ್ವಾತಂತ್ರ್ಯ ನಮಗಿದೆ (೨.೧೧). ಜೀವನದಲ್ಲಿ ಕಷ್ಟಗಳು ಸರ್ವೇಸಾಮಾನ್ಯ; ನಾವು ನಮ್ಮ ನಮ್ಮ ಕರ್ತವ್ಯಪಾಲನೆ ಮಾಡುತ್ತಾ ನಮ್ಮ ಕಷ್ಟಗಳನ್ನು ಪರಿಹಾರಮಾಡಿಕೊಳ್ಳಬೇಕು. ಆದರೆ ಕಷ್ಟಗಳ ಸಂಕೋಲೆಯಲ್ಲೇ ಸಿಲುಕಿ ಜೀವನದ ಉದ್ದೇಶವನ್ನು ಮರೆಯುವುದು ತಪ್ಪು. ಆನಂದವು ನಮ್ಮ ಜೀವನದಲ್ಲಿ ಬಂದುಹೋಗುವ ವ್ಯಕ್ತಿ-ವಿಷಯ-ಸಂದರ್ಭಗಳ ಮೇಲೆ ಅವಲಂಬಿತವಾಗದೇ ನಮ್ಮ ಸ್ವಭಾವವೇ ಆಗಿದೆ. ಹಾಗಾಗಿ, ನಾವು ಆನಂದದಿಂದಿರಲು ಸಂಕಲ್ಪಿಸಿದಲ್ಲಿ ಯಾವುದೇ ಸ್ಥಳ-ಸಮಯ-ಪರಿಸ್ಥಿತಿಗಳಲ್ಲಿಯೂ ಎಲ್ಲ ಸಂದರ್ಭಗಳಲ್ಲಿಯೂ ಆನಂದದಿಂದಿರಬಹುದು. ಈ ಪರಮಸತ್ಯವನ್ನು ಅರ್ಥೈಸಿಕೊಂಡು, ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಮಾತ್ರ ಸಂತೃಪ್ತ ಜೀವನ ನಮ್ಮದಾಗುತ್ತದೆ. ಈ ಗುರಿಯನ್ನು ತಲುಪುವ ಹಾದಿಯಲ್ಲಿ ಅಡ್ಡಿಯಾಗಬಹುದಾದ ಸಂಗತಿಗಳು (ಪ್ರತಿಬಂಧಕಗಳು) ಇಂತಿವೆ–

  1. ಆಲಸ್ಯ
  2. ವ್ಯಕ್ತಿ, ವಿಷಯ ಮತ್ತು ಸಂದರ್ಭಗಳ ಮೇಲಿನ ಅತಿಯಾದ ಬಾಂಧವ್ಯ
  3. ಮನಸ್ಸು ಮತ್ತು ಪಂಚೇಂದ್ರಿಯಗಳ ಮೇಲಿನ ನಿಯಂತ್ರಣದ ಕೊರತೆ
  4. ಜೀವ (ನಾನು) -ಜಗತ್-ಈಶ್ವರ — ಇವುಗಳ ಬಗೆಗಿನ ತಿಳುವಳಿಕೆಯ ಕೊರತೆ

ಶ್ರೀಮದ್-ಭಗವದ್ಗೀತೆಯು ಈ ಎಲ್ಲ ಪ್ರತಿಬಂಧಕಗಳನ್ನು ವ್ಯವಸ್ಥಿತವಾಗಿ ಪಾರುಮಾಡಿ, ಯಶಸ್ಸಿನ ಪಥದೆಡೆಗೆ ಕರೆದೊಯ್ಯುತ್ತದೆ (೫.೭).

ನಾನು ಯಾರು?

ನನ್ನ ಜೀವನಕ್ಕೆ ನಾನೇ ಹೊಣೆ. ನನ್ನ ಜೀವನದ ಆಗು-ಹೋಗುಗಳಿಗೆ ನಾನೇ ಈ ಜನ್ಮದಲ್ಲಾಗಲಿ ಅಥವಾ ಪೂರ್ವಜನ್ಮದಲ್ಲಾಗಿ ಮಾಡಿದ ಕರ್ಮಗಳು ಮತ್ತು ಸಂಕಲ್ಪಗಳೇ ಕಾರಣ (೬.೪೧-೪೪). ನಾನು ಈಗ ಮಾಡುವ ಕರ್ಮಗಳಲ್ಲಿ ಆಯ್ಕೆಯ ಸ್ವಾತಂತ್ರ್ಯ ಇದ್ದೇ ಇದೆ. ಹಾಗಾಗಿ ನಮ್ಮ ಜೀವನದಲ್ಲಿ ಪ್ರಾಪ್ತವಾಗುವ ಫಲಾಫಲಗಳು ನಮ್ಮ ಈಗಿನ ಮತ್ತು ಹಿಂದಿನ ಕರ್ಮ-ಸಂಕಲ್ಪಗಳ ಮೇಲೆ ಅವಲಂಬಿತವಾಗಿರುತ್ತವೆ (೨.೪೭).

ನನ್ನ ಶರೀರ, ಮನಸ್ಸು ಕರ್ಮ ಮಾಡಲು ಹಾಗೂ ಚಿಂತಿಸಲು ಸಾಧನಗಳು/ಕರಣಗಳು (೧೫.೯). ಆದ್ದರಿಂದ ನಾನು ಶರೀರ-ಮನಸ್ಸಿಗಿಂತ ಬೇರೆ. ಪ್ರಪಂಚವನ್ನು ಅರಿಯಲು ಮತ್ತು ನನ್ನನ್ನು ವ್ಯಕ್ತಪಡಿಸಲು ಶರೀರ-ಮನಸ್ಸುಗಳನ್ನು ಬಳಸುವ ಜೀವ ನಾನು. ಇತರ ಉಪಕರಣಗಳಾದ ಅಗ್ನಿ, ವಿದ್ಯುತ್, ಅಣುಶಕ್ತಿ ಮುಂತಾದವುಗಳ ಬಳಕೆಯಲ್ಲಿ ಹೇಗೆ ಅವು ನಮ್ಮ ಹಿಡಿತದಲ್ಲಿ ಇದ್ದರೆ ಗೆಳೆಯನಂತೆ ಕಾರ್ಯಸಿದ್ಧಿಗೆ ಸಹಾಯಕವೋ ಮತ್ತು ನಮ್ಮ ಹತೋಟಿ ತಪಿದಲ್ಲಿ ವಿನಾಶಕ್ಕೆ ಈಡುಮಾಡುತ್ತವೆ, ಅಂತೆಯೇ ಶರೀರ-ಮನಸ್ಸುಗಳು (೬.೫-೬).

ಮರಣಾನಂತರ ನಾನು ಮನಸ್ಸಿನ (ಮತ್ತು ಅದರ ಸಂಸ್ಕಾರಗಳ) ಸಮೇತ ಹೊಸ ದೇಹವನ್ನು ಸೇರುತ್ತೇನೆ (೧೫.೮). ಆದುದರಿಂದ, ಮಾಡಿದ ಕರ್ಮಫಲಗಳನ್ನು ಈ ಜನ್ಮದಲ್ಲಾಗಲಿ ಮುಂದಿನ ಜನ್ಮಗಳಲ್ಲಾಗಲಿ ಅನುಭವಿಸಲೇಬೇಕು. ಈ ದೇಹ ಒಂದು ಬಟ್ಟೆಯಿದ್ದಂತೆ — ನಾವು ಹರಿದ ಬಟ್ಟೆಯನ್ನು ಬದಲಿಸಿ ಹೊಸ ಬಟ್ಟೆಯನ್ನು ತೊಡುವಂತೆ ಮರಣಾನಂತರ ಜೀವನು ಮತ್ತೊಂದು ದೇಹವನ್ನು ಸೇರುತ್ತಾನೆ (೨.೨೨). ಮರಣವೂ ಕೂಡ ಬಾಲ್ಯ, ಯೌವನ, ಮುಪ್ಪುಗಳಂತೆ ಒಂದು ಮಾರ್ಪಾಡು ಮಾತ್ರವೇ (೨.೧೩); ವಾಸ್ತವದಲ್ಲಿ ನಾನು ಹುಟ್ಟುವುದೂ ಇಲ್ಲ, ಮರಣಿಸುವುದೂ ಇಲ್ಲ (೨.೨೦). ಈ ಮಾರ್ಪಾಡುಗಳು ದೇಹಕ್ಕೆ ಮಾತ್ರವೇ, ನಾನು ಅಮರ.

ಈಶ್ವರ ಯಾರು?

ವಿಶ್ವದಲ್ಲಿ ಇರುವುದನ್ನೆಲ್ಲ ತನ್ನಲ್ಲಿ ಅಡಗಿಸಿಕೊಂಡಿರುವ ತತ್ತ್ವವೇ ಈಶ್ವರ (ದೇವರು). ಈ‌ ವಿಶ್ವವು ಈಶ್ವರನ ಭೌತಿಕಶರೀರ. ಎಲ್ಲ ಜೀವಿಗಳ ಮನಸ್ಸುಗಳ ಒಟ್ಟು ಆಲೋಚನೆಗಳು ಈಶ್ವರನ ಮನಸ್ಸು. ವಿಶ್ವದ ಭೌತಿಕ ಮತ್ತು ನೈತಿಕ ನಿಯಮಗಳು ಅವನ ಇಚ್ಛಾಶಕ್ತಿ – ಎಂದರೆ, ಈಶ್ವರನು ಈ ಸೃಷ್ಟಿಯ ನಿಯಾಮಕನು (೭.೭).

ಜಗತ್ತಿನ ಎಲ್ಲ ವಿಷಯಗಳ ಸಾರವೇ ಈಶ್ವರನು. ನೀರಿನಲ್ಲಿ ರಸವಾಗಿ, ಬೆಂಕಿಯಲ್ಲಿ ಉಷ್ಣತೆಯಾಗಿ, ಬುದ್ಧಿವಂತರಲ್ಲಿ ಬುದ್ಧಿಯಾಗಿ, ಬಲಿಷ್ಠರಲ್ಲಿ ಬಲವಾಗಿ (೭.೮-೧೧) ಹಾಗೂ ಚೇತನಜೀವಿಗಳಲ್ಲಿ ಚೈತನ್ಯವಾಗಿ ಇರುವವನೇ ಈಶ್ವರನು. ಯಾವ ರೀತಿ ವಿದ್ಯುಚ್ಛಕ್ತಿಯು ವಿವಿಧ ಉಪಕರಣಗಳ ಚಾಲನೆಗೆ ಶಕ್ತಿ ಒದಗಿಸುವುದೋ ಹಾಗೆಯೇ ಈಶ್ವರನು ಚೈತನ್ಯರೂಪದಲ್ಲಿ ಎಲ್ಲ ಪ್ರಾಣಿಗಳಿಗೆ ಜೀವ ತುಂಬುವನು (೧೮.೬೧, ೧೩.೨, ೧೦.೨೦).

ಈಶ್ವರನನ್ನು ಬಿಟ್ಟು ಸ್ವತಂತ್ರವಾದ ಅಸ್ತಿತ್ವ ಪ್ರಪಂಚದ ಯಾವ ವಸ್ತುವಿಗೂ ಇಲ್ಲ. ಮಡಕೆಗೆ ಮಣ್ಣು ಮತ್ತು ಕುಂಬಾರ ಎಂಬ ಎರಡು ಕಾರಣಗಳಿವೆ. ಮಣ್ಣು ಉಪಾದಾನಕಾರಣ ಮತ್ತು ಕುಂಬಾರ ನಿಮಿತ್ತಕಾರಣ. ಈ ಜಗತ್ತಿನ ವಿಷಯದಲ್ಲಿ ಈಶ್ವರನೇ ಉಪಾದಾನ ಮತ್ತು ನಿಮಿತ್ತಕಾರಣ (ಅಭಿನ್ನ-ನಿಮಿತ್ತ-ಉಪಾದಾನ-ಕಾರಣ) (೧೦.೨೦). ಹೇಗೆ ಅಲೆಗಳು ಸಮುದ್ರದಲ್ಲಿ ಹುಟ್ಟಿ, ಸಮುದ್ರದಲ್ಲೇ ಇದ್ದು, ಸಮುದ್ರದಲ್ಲೇ ಲಯವಾಗುವುದೋ; ಹಾಗೆಯೇ ಈ ಜಗತ್ತು ಕೂಡ ಈಶ್ವರನಿಂದಲೇ ಹುಟ್ಟಿ, ಈಶ್ವರನಲ್ಲೇ ನೆಲೆಸಿ, ಈಶ್ವರನಲ್ಲೇ ಲೀನವಾಗುತ್ತದೆ.

ಈ ರೀತಿಯಲ್ಲಿ ಅರ್ಥಮಾಡಿಕೊಂಡಾಗ, ಈಶ್ವರನನ್ನು ನಾವು ಯಾವ ಹೆಸರಿನಿಂದಲಾದರೂ, ಯಾವ ರೂಪದಿಂದಾದರೂ ಪೂಜಿಸಬಹುದು (೭.೨೧). ದೇವರ ಆರಾಧನೆಗಾಗಿ ಬಳಸುವ ನಾಮ-ರೂಪಗಳು ಭಕ್ತನ ಸಂದರ್ಭ ಹಾಗೂ ಕೋರಿಕೆಗಳ ಮೇಲೆ ಅವಲಂಬಿಸಿರುತ್ತದೆ. ಉದಾಹರಣೆಗೆ; ಈಶ್ವರನನ್ನು

  • ಕಾರ್ಯಾರಂಭದಲ್ಲಿ ವಿಘ್ನವಿನಾಶಕ್ಕಾಗಿ ಗಣಪತಿಯ ರೂಪದಲ್ಲಿ,
  • ವ್ಯಾಪಾರ-ವ್ಯವಹಾರಗಳಲ್ಲಿ ಲಾಭಕ್ಕಾಗಿ ಲಕ್ಷ್ಮಿಯ ರೂಪದಲ್ಲಿ,
  • ವಿದ್ಯಾಭ್ಯಾಸದಲ್ಲಿ ಜ್ಞಾನಾರ್ಜನೆಗಾಗಿ ಸರಸ್ವತಿಯ ರೂಪದಲ್ಲಿ

ಆರಾಧಿಸುತ್ತೇವೆ. ಅಂತೆಯೇ ಈಶ್ವರನು –

  • ನಾವು ಭಾರತೀಯರೆಂದು ದೇಶಭಕ್ತಿಯಿಂದ ಭಾವಿಸಿದಾಗ ಭಾರತಮಾತೆ,
  • ಭೂಮಿಯ ಮೇಲೆ ಹುಟ್ಟಿ ಜೀವಿಸುತ್ತಿರುವ ಪ್ರಾಣಿಯೆಂದು ಭಾವಿಸಿದಲ್ಲಿ ಭೂದೇವಿ,
  • ಕರ್ಮಗಳನ್ನು ಆಚರಿಸುವ ಕರ್ತಾ ಎಂದು ಭಾವಿಸಿದಲ್ಲಿ ಕರ್ಮಫಲದಾತಾ,
  • ವೈಷ್ಣವರೆಂದು ಭಾವಿಸಿದರೆ ವಿಷ್ಣು, ಮತ್ತು
  • ಶೈವರೆಂದು ಭಾವಿಸಿದರೆ ಶಿವ.

ಅಷ್ಟೇ ಅಲ್ಲದೇ ಈಶ್ವರನನ್ನು ನಾವು ತಾಯಿಯಾಗಿ, ತಂದೆಯಾಗಿ, ಮಗುವಾಗಿ, ಗುರುವಾಗಿ, ಸ್ನೇಹಿತನಾಗಿ, ಪ್ರಭುವಾಗಿ ಕೂಡ ಪೂಜಿಸಬಹುದು.

ಯಾವಾಗ ಮನುಷ್ಯರಲ್ಲಿ ಧರ್ಮದ (ಕರ್ಮನಿಯತಿಯ) ಬಗ್ಗೆ ಶ್ರದ್ಧೆ ಕುಗ್ಗಿ ಅಧರ್ಮ ವಿಜೃಂಭಿಸುವುದೋ, ಆಗ ಈಶ್ವರನು ಧರ್ಮವನ್ನು ಕಾಪಾಡಲು ಅವತರಿಸುತ್ತಾನೆ (೪.೭-೮). ಈ ಅವತಾರಗಳ ರೂಪದಲ್ಲೂ ಈಶ್ವರನನ್ನು ಪೂಜಿಸಬಹುದು.

ಕರ್ಮಯೋಗ

ಈಶ್ವರನು ವಿಶ್ವವ್ಯಾಪೀ ತತ್ತ್ವವು. ನಮ್ಮ ಜೀವನದಲ್ಲಿ ಸಂದರ್ಭಾನುಸಾರವಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ – ತಂದೆ, ತಾಯಿ, ಅಣ್ಣ, ಅಕ್ಕ, ವಿದ್ಯಾರ್ಥಿ, ಸಮಾಜದಲ್ಲಿ ಪ್ರಜೆ ಇತ್ಯಾದಿ. ನಾವು ಯಾವ ಪಾತ್ರವನ್ನು ಪೋಷಿಸುತ್ತೇವೋ ಅದಕ್ಕೆ ಪೂರಕವಾಗಿ ಮಿಕ್ಕ ಪಾತ್ರಗಳನ್ನು ಈಶ್ವರನೇ ಪೋಷಿಸುತ್ತಾನೆ (೭.೨೧). ಈ ರೀತಿಯಲ್ಲಿ ನಾವು ಈಶ್ವರನ ಜೊತೆಯಲ್ಲೇ ಒಡನಾಡುತ್ತೇವೆ. ನಾವು ಮಾಡುವ ಪ್ರತಿಯೊಂದು ಕಾರ್ಯವು ಈಶ್ವರನಿಗೆ ನಮ್ಮ ಕೊಡುಗೆ. ಅಂತೆಯೇ ನಮ್ಮ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸಂದರ್ಭವೂ ಈಶ್ವರನಿಂದ ನಮಗೆ ಬರುವ ಕೊಡುಗೆ (೯.೨೭).

ಮೇಲೆ ಹೇಳಿದ ಪ್ರತಿಬಂಧಕಗಳನ್ನು ಪರಿಹರಿಸಲು ಕೆಳಗಿನ ಮೂರು ಉಪಾಯಗಳನ್ನು ಬಳಸಬೇಕು – ಯಜ್ಞ, ದಾನ ಮತ್ತು ತಪಸ್ಸು.

ಯಜ್ಞ – ಪ್ರಂಚ ಮಹಾಯಜ್ಞ (೩.೧೧, ೪.೨೮)

1. ದೇವಯಜ್ಞ (ಪ್ರಕೃತಿ ಸೇವೆ)
ಪರಿಸರವನ್ನು ಕಾಪಾಡಿ, ಶುಚಿಯಾಗಿಡುವುದು. ಗಿಡ-ಮರಗಳನ್ನು ನೆಟ್ಟು, ಬೆಳೆಸಿ ಉಳಿಸುವುದು. ಸಂಪನ್ಮೂಲಗಳ ಸದ್ಬಳಕೆ. ನಮ್ಮ ಜೀವನದಲ್ಲಿ ದೊರಕಿರುವ ಒಳ್ಳೆಯದನ್ನು ಕರುಣಿಸಿದ ಈಶ್ವರನನ್ನು ಕೃತಜ್ಞತೆಯಿಂದ ನೆನೆಯುವುದು ಮತ್ತು ನಿಯಮಿತವಾಗಿ ದೇವಸ್ಥಾನಗಳಿಗೆ ಹೋಗುವುದು (೯.೨೬, ೧೭.೧೪).
2. ಭೂತಯಜ್ಞ (ಪ್ರಾಣಿಸೇವೆ)
ಎಲ್ಲ ಜೀವರಾಶಿಗಳನ್ನು ಪೋಷಿಸುವುದು, ಯೋಗ್ಯರೀತಿಯಲ್ಲಿ ಸತ್ಕರಿಸಿ ಹಿಂಸಿಸದೇ ಕಾಪಾಡುವುದು.
3. ಮನುಷ್ಯಯಜ್ಞ (ಸಮಾಜಸೇವೆ)
ಸಮಾಜದ ಎಲ್ಲರಿಗೂ ಸಹಾಯಮಾಡುವುದು ಮತ್ತು ಎಲ್ಲ ಸ್ತರದ ಜನರನ್ನೂ ಯೋಗ್ಯ ರೀತಿಯಲ್ಲಿ ಸತ್ಕರಿಸುವುದು. ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಥವಾ ಸಹಾಯ ಮಾಡಬೇಕು. ಸಮಾಜದ ಎಲ್ಲ ಜನರಿಂದ ಪಡೆದ ಸೇವೆಗೆ ತಕ್ಕಂತೆ ಸಂಭಾವನೆ ನೀಡುವುದು.
4. ಪಿತೃಯಜ್ಞ (ವಂಶಕ್ಕೆ ಕರ್ತವ್ಯ)
ತಂದೆ, ತಾಯಿ, ಅಜ್ಜಿ, ತಾತ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದು. ಹಿರಿಯರನ್ನು ಗೌರವಿಸುವುದು, ಅವರಿಗೆ ಸಹಾಯ ಮಾಡುವುದು. ಕಾಲವಾಗಿರುವ ಪೂರ್ವಜರ ಒಳಿತಿಗಾಗಿ ಪ್ರಾರ್ಥಿಸುವುದು ಮತ್ತು ಕೃತಜ್ಞತೆಯಿಂದ ನಮಿಸುವುದು. ಮಕ್ಕಳೊಂದಿಗೆ ಸ್ನೇಹಮಯವಾಗಿರುವುದು. ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಇಲ್ಲವೇ ಸಹಾಯ ಮಾಡುವುದು.
5. ಋಷಿಯಜ್ಞ (ಸಂಸ್ಕೃತಿಗೆ ಸೇವೆ)
ಗುರುಗಳಿಗೆ ಸೇವೆ-ಶುಶ್ರೂಷ ಮಾಡಬೇಕು. ಜ್ಞಾನವನ್ನು ಸಂಪಾದಿಸಿ, ಜ್ಞಾನಾಭಿವೃದ್ಧಿ ಮಾಡಿ ಸತ್ಪಾತ್ರರಿಗೆ ಪ್ರಚಾರ ಮಾಡಬೇಕು. ಮಕ್ಕಳ ಮತ್ತು ವಯಸ್ಕರ ಶಿಕ್ಷಣದಲ್ಲಿ ಸಹಾಯ ಮಾಡುವುದು. ಅವಕಾಶವಂಚಿತ ಮಕ್ಕಳಿಗೆ ವಿದ್ಯೆ ಕೊಡಿಸುವಲ್ಲಿ ತೊಡಗಿಸಿಕೊಳ್ಳಬೇಕು ಇಲ್ಲವೇ ಅದಕ್ಕೆ ನೆರವಾಗಬೇಕು. ವಿಜ್ಞಾನ, ಗಣಿತ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ತತ್ತ್ವಶಾಸ್ತ್ರ, ಧರ್ಮ ಮೊದಲಾದ ವಿಷಯಗಳ ಅಧ್ಯಯನ ಮತ್ತು ಅಧ್ಯಾಪನಗಳಿಗೆ ಬೆಂಬಲ ನೀಡಬೇಕು.

ದಾನ

ಹಣ, ಸಮಯ, ವಸ್ತು, ಜ್ಞಾನ – ಇವುಗಳ ಅವಶ್ಯಕತೆ ಇರುವವರಿಗೆ ದಾನಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ದಾನವನ್ನು ಮಾಡುವಾಗ ಅದರಿಂದ ಯಾವುದೇ ಲಾಭವನ್ನು ನಿರೀಕ್ಷಿಸದೇ ವಿನಯದಿಂದ, ಸೇವಾ ಮನೋಭಾವದೊಂದಿಗೆ ಕೊಡಬೇಕು (೧೭.೨೦).

ತಪಸ್ಸು (ಹತ್ತು ಸದ್ಗುಣಗಳು)

(ಈ ಕೆಳಗಿನ ಪಟ್ಟಿಯನ್ನು ಪಾತಂಜಲ-ಯೋಗಸುತ್ರದಿಂದ ಆಯ್ದುಕೊಳ್ಳಲಾಗಿದೆ. ಭಗವದ್ಗೀತೆಯಲ್ಲಿಯೂ ಇದೇ ವಿಷಯವನ್ನು ಬೇರೆ ಬೇರೆ ವಿಧಗಳಲ್ಲಿ ಹೇಳಲಾಗಿದೆ: ೧೩.೭-೧೧, ೧೬.೧-೩, ೧೭.೧೪-೧೬).
1. ಸತ್ಯ – ಸುಳ್ಳು ಹೇಳಬಾರದು. ನಮಗೆ ತಿಳಿದಿರುವ ಎಲ್ಲ ನಿಜವನ್ನೂ ಹೇಳಬೇಕೆಂದಲ್ಲ. ಆದರೆ ನಮ್ಮ ಜ್ಞಾನ, ಆಶಯ, ಉದ್ದೇಶ, ಭಾವನೆ, ಮಾತು ಮತ್ತು ಕಾರ್ಯಗಳಲ್ಲಿ ಹೊಂದಾಣಿಕೆ ಇರಬೇಕು.
2. ಅಹಿಂಸೆ – ಮತ್ತೊಬ್ಬರ ಬಲಹೀನತೆಯನ್ನು ನಮ್ಮ ಲಾಭಕ್ಕಾಗಿ ದುರುಪಯೋಗ ಪದಿಸಿಕೊಳ್ಳಬಾರದು. ಯಾವುದೇ ಜೀವಿಗೆ ಹಾನಿ ಮಾಡದೇ ಬದುಕುವುದು ಅಸಾಧ್ಯ, ಆದರೆ ಸಾಧ್ಯವಾದ ಮಟ್ಟಿಗೆ ಹಾನಿ ಮಾಡದೇ ಇರಬೇಕು. ಯಾರಿಗೋ ಹಾನಿಯಾಗಲಿ ಎಂದು ಕೋರಬಾರದು. ಅಹಿಂಸೆಯನ್ನು ಆಲೋಚನೆಯಲ್ಲೂ, ಮಾತಿನಲ್ಲಿಯೂ, ಕಾರ್ಯದಲ್ಲಿಯೂ ಪಾಲಿಸಬೇಕು ಮತ್ತು ಎಲ್ಲರಿಗೂ ಸಾಧ್ಯವಾದಷ್ಟು ಸಹಾಯ ಮಾಡಬೇಕು.
3. ಬ್ರಹ್ಮಚರ್ಯ – ಅನ್ಯ ಲಿಂಗದವರೊಡನೆ (ಸ್ತ್ರೀಯರು ಪುರುಷರ ಜೊತೆ, ಪುರುಷರು ಸ್ತ್ರೀಯರ ಜೊತೆ) ಅಸಭ್ಯ ಮತ್ತು ಅನುಚಿತವಾಗಿ ವರ್ತಿಸಬಾರದು. ಜನರನ್ನು ಕೇವಲ ಭೋಗದ ವಸ್ತುಗಳನ್ನಾಗಿ ಕಾಣದೇ, ಮಾನವೀಯ (ಭಾವನೆಗಳುಳ್ಳ ಮತ್ತು ಯೋಚಿಸುವ ಜೀವಿಗಳೆಂಬ) ದೃಷ್ಟಿಯಿಂದ ಕಾಣಬೇಕು. ಅವಿವಾಹಿತರಿಗೆ ಸಂಪೂರ್ಣ ಬ್ರಹ್ಮಚರ್ಯ, ವಿವಾಹಿತರಿಗೆ ವಿವಾಹಬಂಧನದಲ್ಲಿ ಪವಿತ್ರತೆ.
4. ಅಸ್ತೇಯ – ಅನ್ಯಾದ ಅಥವಾ ಅಧರ್ಮದ ಮಾರ್ಗದಿಂದ ಸಂಪತ್ತನ್ನು ಗಳಿಸಬಾರದು ಹೊಂದಲೂಬಾರದು.
5. ಅಪರಿಗ್ರಹ – ಅಗತ್ಯಕ್ಕಿಂತ ಹೆಚ್ಚು ಹಣವನ್ನು ಹೊಂದಬಾರದು ಹಾಗೂ ಬಳಸಬಾರದು. ಸರಳ ಜೀವನ ನಡೆಸತಕ್ಕದ್ದು.
6. ಶೌಚ – ಮನಸ್ಸು, ಶರೀರ, ಮನೆಯಿಂದ ಹಿಡಿದು ಸುತ್ತಲಿನ ಪರಿಸರವನ್ನು ಶುಚಿಯಾಗಿ ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದು.
7. ಸಂತೋಷ – ಯಾವಾಗಲೂ ಉಲ್ಲಾಸ, ಉತ್ಸಾಹ ಮತ್ತು ತೃಪ್ತಿಯಿಂದ ಇರಬೇಕು. ಯಾವ ಸಂದರ್ಭದಲ್ಲೂ ದೂಷಣೆ ಮತ್ತು ಅಸಮಾಧಾನಗಳಿಗೆ ಅವಕಾಶಕೊಡಬಾರದು.
8. ತಪಸ್ – ಶಿಸ್ತುಬದ್ಧ ಜೀವನ ನಡೆಸಬೇಕು. ಸಮಯಕ್ಕೆ ಸರಿಯಾಗಿ (ನಿದ್ದೆಯಿಂದ) ಏಳುವುದು, ಊಟ-ತಿಂಡಿ, ಮಲಗುವುದು ಮುಂತಾದವನ್ನು ರೂಢಿಸಿಕೊಳ್ಳಬೇಕು. ನಾವು ಏನು ತಿನ್ನುತ್ತೇವೋ, ಓದುತ್ತೇವೋ, ನೋಡುತ್ತೇವೋ, ಮಾತನಾಡುತ್ತೇವೋ, ಆಲೋಚಿಸುತ್ತೇವೋ ಅವುಗಳ ಮೇಲೆ ಹಿಡಿತ/ನಿಯಂತ್ರಣ ಇರಬೇಕು (೬.೧೬-೧೭). ನಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಲು ಮತ್ತು ಆಲೊಚನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರತಿದಿನವೂ ಧ್ಯಾನಮಾಡುವುದನ್ನು ರೂಢಿಸಿಕೊಳ್ಳಬೇಕು (೬.೧೧-೧೪).
9. ಸ್ವಾಧ್ಯಾಯ – ಹಿತಕರ ಆಲೋಚನೆಗಳಿಗೆ ಒತ್ತುಕೊಡಬೇಕು. ಒಳ್ಳೆಯ ಪುಸ್ತಕಗಳನ್ನು ಓದುವ ಮತ್ತು ಅವುಗಳ ವಿಚಾರವಾಗಿ ಆಳವಾಗಿ ವಿಮರ್ಷಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಮಾನಮನಸ್ಕರ ಜೊತೆ ಆ ವಿಚರಗಳನ್ನು ಹಂಚಿಕೊಂಡು ಚರ್ಚಿಸಬೇಕು.
10. ಈಶ್ವರ ಪ್ರಣಿಧಾನ – ಈಶ್ವರನಲ್ಲಿ ಪಕ್ಷಪಾತವಿಲ್ಲ ಎಂಬುದರಲ್ಲಿ ದೃಢವಾದ ನಂಬಿಕೆಯಿರಲಿ. “ಮಾಡಿದ್ದುಣ್ಣೋ ಮಹಾರಾಯ’ ಎಂಬ ಗಾದೆಯಂತೆ ನಮಗೆ ಜೀವನದಲ್ಲಿ ಒದಗಿಬರುವ ಪ್ರತಿಯೊಂದು ಸನ್ನಿವೇಶವು (ನಮ್ಮ ಕರ್ಮಕ್ಕೆ ಅನುಸಾರವಾಗಿ) ಉಚಿತವಾದದ್ದೇ. ಹಾಗಾಗಿ, ನಾವು ಮಾಡುವ ಪ್ರತಿಯೊಂದು ಕಾರ್ಯವನ್ನೂ ಈಶ್ವರನಿಗೆ ಅರ್ಪಿಸುವ ಸೇವೆಯೆಂದು ಭಾವಿಸಿ ಅದರಿಂದ ಒದಗುವ ಫಲವನ್ನು ಈಶ್ವರನ ಪ್ರಸಾದವೆಂದು ಸ್ವೀಕರಿಸಬೇಕು. ಗೆಲುವನ್ನು ವಿನಯದಿಂದ ಮತ್ತು ಸೋಲನ್ನು ಎದೆಗುಂದದೇ ಸ್ವೀಕರಿಸಬೇಕು.

ಉಪಯೋಗಕರವಾದ ಆಸೆ-ಆಕಾಂಕ್ಷೆಗಳು ಇರುವುದು ತಪ್ಪಲ್ಲ. ಆ ಆಸೆಗಳನ್ನು ಪೂರೈಸಿಕೊಳ್ಳಬಹುದು, ಆದರೆ ಅವು ಈ ಮೂರು ಪ್ರಮಾಣಗಳಿಗೆ ಅನುಗುಣವಾಗಿರಬೇಕು:
1. ನ್ಯಾಯಸಮ್ಮತ ಮತ್ತು ಧರ್ಮಸಮ್ಮತವಾಗಿದ್ದು ಇತರರಿಗೆ ಹಾನಿಯನ್ನು ಉಂಟುಮಾಡಬಾರದು.
2. ಆಸೆಗಳು ಮಿತವಾಗಿರಬೇಕು. ಯಜ್ಞ-ದಾನ-ತಪಸ್ಸುಗಳನ್ನು ನಿಷ್ಕಾಮವಾಗಿ ಆಚರಿಸುವುದರಲ್ಲಿ ಅಡ್ಡಿಯಾಗಬಾರದು.
3. ಆಸೆಗಳು ಬಂಧನಕ್ಕೆ ಕಾರಣವಾಗಬಾರದು. ಅವುಗಳ ಪೂರೈಕೆ ಆತಂತವನ್ನು ಉಂಟುಮಾಡಬಾರದು. ಗೆಲೆವು ಅಹಂಕಾರವನ್ನು ಸೋಲು ಕೋಪವನ್ನು ಉಂಟುಮಾಡದಂತೆ ಎಚ್ಚರಿಕೆ ವಹಿಸಬೇಕು.

ನಾವು ಈ ಪ್ರಪಂಚದಿಂದ ಪಡೆಯುವುದಕ್ಕಿಂತ ಹೆಚ್ಚು ಕೊಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಯಜ್ಞ-ದಾನ-ತಪಸ್ಸುಗಳನ್ನು ಆಚರಿಸುವುದರಿಂದ ಪರಿಶುದ್ಧವಾದ ಮನಸ್ಸನ್ನು ಪಡೆಯಬಹುದು. ಆದುದರಿಂದ ಅವುಗಳನ್ನು ಕಟ್ಟುನಿಟ್ಟಾಗಿ ಆಚರಿಸತಕ್ಕದ್ದು (೧೮.೫). ಹೊಯ್ದಾಡದ, ಏಕಾಗ್ರತೆಯುಳ್ಳ, ಅಧ್ಯಾತ್ಮಜ್ಞಾನವನ್ನು ಪಡೆಯಬೇಕೆಂದ ತೀವ್ರ ಇಚ್ಛೆಯುಳ್ಳ ಮನಸ್ಸೇ ಪವಿತ್ರವಾದ ಮನಸ್ಸು (೬.೨೭). ಶಾಂತಮಯ ಹಾಗೂ ಉನ್ನತ ಜೀವನ ನಡೆಸಲು ಇಂತಹ ಮನಸ್ಸು ಅನಿವಾರ್ಯ.

ಈ ವಿಚಾರಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಯಜ್ಞ-ದಾನ-ತಪಸ್ಸುಗಳನ್ನು ಆಚರಿಸಿ ಸರಳ ಮತ್ತು ಉದಾತ್ತ ಜೀವನ ನಡೆಸಬೇಕಾದರೆ ನಮಗೆ ಸಾಧು-ಸಜ್ಜನರ ಸಂಗ ಅತ್ಯವಶ್ಯಕ.

ಮನೆಯಲ್ಲಿ ಪೂಜೆ/ಪ್ರಾರ್ಥನೆ/ಧ್ಯಾನ

ಧ್ಯಾನದ ಬಗ್ಗೆ ಗೀತೆಯಲ್ಲಿ ವಿಸ್ತಾರವಾಗಿ ಹೇಳಲ್ಪಟ್ಟಿದೆ (೬.೧೧-೧೪) ಮತ್ತು ಸುಲಭವಾದ ವಿಧಾನವನ್ನು ತಿಳಿಸಲಾಗಿದೆ.

ಪೂಜಾಸಾಮಗ್ರಿಗಳಿಗಾಗಿ ಮನೆಯಲ್ಲಿ ಒಂದು ಕೋಣೆಯನ್ನೋ ಇಲ್ಲವೇ ಒಂದು ಅಲ್ಮೆರಾವನ್ನೋ ಏರ್ಪಾಡುಮಾಡಿಕೊಂಡು ಅದರಲ್ಲಿ ನಿಮ್ಮ (ಕುಟುಂಬದವರ) ಇಷ್ಟದೇವತೆಯ/ಗಳ ಪ್ರತಿಮೆಯನ್ನು/ಗಳನ್ನು (ಫೋಟೊ) ಅಥವಾ ಮೂರ್ತಿಯನ್ನು/ಗಳನ್ನು ಇಟ್ಟು ಶುಭ್ರವಾಗಿ ಅಂದವಾಗಿ ಅಲಂಕರಿಸಿರಿ.

ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಅಥವಾ ಎರಡೂ ಬಾರಿ ಪೂಜೆ ಮಾಡಿ ಕನಿಷ್ಠ ಹದಿನೈದು ನಿಮಿಷವಾದರೂ ಮೀಸಲಿಡಿ ಮತ್ತು ನಿರ್ದಿಷ್ಟ ಸಮಯಕ್ಕೇ ಪೂಜೆ ಮಾಡಲು ಪ್ರಯತ್ನಿಸಿ. ಈ ವೇಳೆಯಲ್ಲಿ ಹೊರಗಿನ ಶಬ್ದಗಳು ಪೂಜೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಿ.

ಪೂಜೆಮಾಡೂವಾಗ ಕುರ್ಚಿಯಲ್ಲಾಗಲಿ, ನೆಲದ ಮೇಲಾಗಲಿ ಕುಳಿತುಕೊಳ್ಳಿ. ನೆಲದ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿ ಮತ್ತು ಒಂದು ಚಾಪೆ ಅಥವಾ ಮಣೆಯ ಮೇಲೆ ಕುಳಿತುಕೊಳ್ಳಿ (೬.೧೧). ಈ ಚಾಪೆ/ಮಣೆಯನ್ನು ಪೂಜೆಗೆ ಬಿಟ್ಟು ಮತ್ತಾವ ಕಾರ್ಯಕ್ಕೂ ಬಳಸದಿರಿ. ಶರೀರ, ಕತ್ತು ಮತ್ತು ತಲೆ ನೇರವಾಗಿದ್ದು ಕದಲದೇ ಇರುವಂತೆ ನೋಡಿಕೊಳ್ಳಿ (೬.೧೩). ಶರೀರವು ವಿಶ್ರಾಂತವಾಗಿರಲಿ.

ನಿಮಗೆ ಇಷ್ಟವಾದ ಇಲ್ಲವೇ ಗುರುವಿನಿಂದ ಸ್ವೀಕರಿಸಿದ ಮಂತ್ರವನ್ನು ಜಪಿಸಿರಿ. ಕೆಲವು ಪ್ರಮುಖವಾದ ಮಂತ್ರಗಳು‌- ಓಂ ನಮಃ ಶಿವಾಯ, ಓಂ ನಮೋ ನಾರಾಯಣಾಯ, ಓಂ ನಮೋ ಭಗವತೇ ವಾಸುದೇವಾಯ, ಓಂ ಶ್ರೀ ರಾಮ್ ಜಯ್ ರಾಮ್ ಜಯ್ ಜಯ್ ರಾಮ್. ಒಂದು ಬಾರಿ ಮಂತ್ರವನ್ನು ಸ್ವೀಕರಿಸಿದ ನಂತರ ಪದೇ ಪದೇ ಬದಲಿಸಬೇಡಿ.

ಈ ಕೆಳಕಂಡ ನಿಯಮಗಳನ್ನು ಪಾಲಿಸಬಹುದು:
1. ಪೂಜೆಯ ವೇಳೆಯಲ್ಲಿ ದೀಪ ಬೆಳಗಿಸುವುದು
2. ಎಲ್ಲ ಜೀವಿಗಳ ಶ್ರೇಯಸ್ಸನ್ನು ಕೋರುವುದು
3. ಸ್ತೋತ್ರ/ಭಕ್ತಿಗೀತೆ ಯನ್ನು ಕೆಲಕಾಲ ಅರ್ಥವನ್ನು ನೆನಪಿಸಿಕೊಳ್ಳುತ್ತಾ ಹಾಡುವುದು
4. ಕೆಲವು ನಿಮಿಷಗಳು ಕಣ್ಣು ಮುಚ್ಚಿ ನಿಶ್ಶಬ್ದವಾಗಿರುವುದು
5. ಹೃದಯದಲ್ಲಿ ಇಷ್ಟದೇವತೆ (ನೀವು ನೋಡುತ್ತಿರುವ ದಿಕ್ಕನ್ನೇ ನೋಡುತ್ತಾ) ಇರುವಂತೆ ಭಾವಿಸಿ ಮಂತ್ರವನ್ನು ೧೦೮ ಬಾರಿ ಜಪಿಸುವುದು. ತುಟಿ, ನಾಲಗೆಗಳ ಅಲುಗಾಟವಿಲ್ಲದೇ ಮನಸ್ಸಿನಲ್ಲೇ ಜಪಿಸುವುದು ಉತ್ತಮ, ಅದು ಸಾಧ್ಯವಾಗದಿದ್ದಲ್ಲಿ ಆದಷ್ಟು ಮೆಲ್ಲಗೆ ಜಪಿಸಬಹುದು.
6. ಯಾವುದಾದರೂ ಒಂದು ಆಧ್ಯಾತ್ಮಿಕ ಪುಸ್ತಕದಿಂದ ಕೆಲವು ಪುಟಗಳನ್ನು ಓದುವುದು. ಭಕ್ತರ ಜೀವನದ ಬಗ್ಗೆ, ವೇದಾಂತವನ್ನು ತಿಳಿಸಿಕೊಡುವ, ಮಹಾತ್ಮರ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ, ಮಹಾತ್ಮರಜೊತೆ ಸಂವಾದಗಳು, ಅವರ ಉಪನ್ಯಾಸಗಳು ಮತ್ತು ಲೇಖನಗಳು – ಹೀಗೆ ಲಭ್ಯವಿರುವ ಎಲ್ಲ ರೀತಿಯ ಪುಸ್ತಕಗಳಲ್ಲಿ ಯಾವುದನ್ನಾದರೂ ಓದಬಹುದು. ಇಲ್ಲವೇ ಆಧ್ಯಾತ್ಮಿಕ ಪ್ರವಚನಗಳನ್ನು ಕೇಳಬಹುದು.
7. ಶಿರಸ್ಸು ನೆಲಕ್ಕೆ ತಾಗುವಂತೆ ಭಗವಂತನಿಗೆ ನಮಸ್ಕರಿಸುವುದು. ಜೀವನದಲ್ಲಿ ಒದಗಿದ ಶ್ರೇಯಸ್ಸಿಗೆ ಕೃತಜ್ಞತೆಗಳನ್ನು ತಿಳಿಸುವುದು. ಉನ್ನತ ಭಾವನೆ, ಕರುಣೆ, ಶಾಂತಿಗಳಿಂದ ಇತರರಿಗೆ ಸಹಾಯಮಾಡುತ್ತಾ ಬದುಕಲು ಶಕ್ತಿಯನ್ನು, ಜ್ಞಾನವನ್ನು ಪ್ರಸಾದಿಸಲು ಕೋರುವುದು. ಭಗವಂತನಲ್ಲಿ ನಿಮ್ಮ ಶರಣಾಗತಿಯ ಕುರುಹಾಗಿ ಹಣೆಯ ಮೇಲೆ ಭಸ್ಮವನ್ನಾಗಲಿ ಕುಂಕುಮವನ್ನಾಗಲಿ ಧರಿಸಿರಿ. ಒಂದು ಪುಸ್ತಕದಲ್ಲಿ ಭಗವನ್ನಾಮವನ್ನು ೧೦೮ ಬಾರಿ ಬರೆಯಬಹುದು. ಪುಸ್ತಕಪೂರ್ತಿಯಾದ ನಂತರ ಪುಸ್ತಕದ ಕಾಗದಗಳಿಂದ ಹೂವುಗಳನ್ನು ಮಾಡಿ, ಆ ಹೂಗಳಿಂದ ಮಾಲೆ ಮಾಡಿ ಹತ್ತಿರದ ದೇವಾಲಯದಲ್ಲಿ ಸಮರ್ಪಿಸಬಹುದು.

ಭಗವಂತನನ್ನೇ ಜೀವನದ ಗುರಿಯಾಗಿ ಹೊಂದಿ, ಮಾಡುವ ಎಲ್ಲ ಕಾರ್ಯಗಳನ್ನು ಅವನಿಗೇ ಅರ್ಪಿಸುತ್ತಾ, ಒದಗಿಬರುವ ಎಲ್ಲ ಫಲಗಳನ್ನೂ ಅವನ ಪ್ರಸಾದವೆಂದೇ ಸ್ವೀಕರಿಸುತ್ತಾ, ಪ್ರತಿದಿನ ಪೂಜಿಸುತ್ತಾ ಇದ್ದರೆ ಅವನಲ್ಲಿ ಭಕ್ತಿ ದೃಢವಾಗುತ್ತದೆ (೯.೩೪).

ಈ ಭಕ್ತಿಯು ಜೀವನದಲ್ಲಿ ಎದುರಾಗುವ ಏರಿಳಿತಗಳನ್ನು ಪ್ರಶಾಂತವಾಗಿ ಸ್ವೀಕರಿಸಲು ಸಹಾಯಮಾಡುತ್ತದೆ. ಎಲ್ಲ ಸದ್ಗುಣಗಳನ್ನು ಪಡೆಯಲು ಯತ್ನಿಸುತ್ತಾ, ಮನಸ್ಸನ್ನು ಶುದ್ಧವಾಗಿ ಶಾಂತವಾಗಿ ಇಟ್ಟುಕೊಳ್ಳುತ್ತಾ ಇರುವ ಭಕ್ತರು ಈಶ್ವರನಿಗೆ ಪ್ರಿಯರು (೧೨.೧೩-೧೯).

ಜೀವನ ವಿಧಾನ

ಹಿಂದೂ ಧರ್ಮದಲ್ಲಿ ಎಲ್ಲ ಕರ್ಮಗಳು (ಪೂಜೆ, ಧ್ಯಾನ, ಯಜ್ಞ ಮುಂತಾದವು), ಸಾಂಸ್ಕೃತಿಕ ಆಚಾರಗಳು, ಹಬ್ಬಹರಿದಿನಗಳು, ಕಥೆಗಳು, ಇತಿಹಾಸಗಳು, ತೀರ್ಥಯಾತ್ರೆಗಳು ಮತ್ತು ಕಲೆಗಳು ಇಲ್ಲಿಯವರೆಗೂ ಹೇಳಿದ ವಿಷಯಗಳನ್ನು ಜೀವನದಲ್ಲಿ ಸಾಕ್ಷಾತ್ಕರಿಸಿಕೊಳ್ಳಲು, ಮನಸ್ಸನ್ನು ಪವಿತ್ರಗೊಳಿಸಲು ಏರ್ಪಾಡುಮಾಡಲಾಗಿವೆ. ಇವುಗಳನ್ನು ಆಚರಿಸುತ್ತಾ, ಮೇಲೆ ಪ್ರತಿಪಾದಿಸಿದ ಸಿದ್ಧಾಂತದ ಜೊತೆ ಹೊಂದಿರುವ ಸಂಬಂಧವನ್ನು ಗುರುತಿಸುತ್ತಾ ಉತ್ತಮವಾದ ಸಾಂಸ್ಕೃತಿಕ, ಮಾನಸಿಕ, ವಿವೇಕವಂತ ಮತ್ತು ಪರಿಪೂರ್ಣ ಜೀವನವನ್ನು ನಡೆಸಬಹುದು. ಹೀಗೆ ಜೀವಿಸಲು ಕೆಲವು ಮಾರ್ಗಗಳು ಹೇಳಲ್ಪಟ್ಟಿದೆ.
1. ಪಂಚಮಹಾಯಜ್ಞ, ದಾನ ಮತ್ತು ಹತ್ತು ಸದ್ಗುಣಗಳ ಸಂಪಾದನೆ ಮಾಡುವುದು
2. ಮೇಲೆ ಹೇಳಿರುವ ಕ್ರಮದಂತೆ ಪ್ರಾರ್ಥನೆ ಮಾಡುವುದು
3. ರಾಮಾಯಣ, ಮಹಾಭಾರತ, ಪುರಾಣಗಳಲ್ಲಿ ಬರುವ ಭಕ್ತರ ಕಥೆಗಳನ್ನು, ಮಹಾತ್ಮರ ಜೀವನದ ಸನ್ನಿವೇಶಗಳನ್ನು ತಿಳಿದುಕೊಳ್ಳುವುದು
4. ಭಗವದ್ಗೀತೆಯ ಶ್ಲೋಕಗಳನ್ನು (ವಿಶೇಷವಾಗಿ ೧೨ ಮತ್ತು ೧೫ನೆ ಅಧ್ಯಾಯಗಳು) ಕಂಠಸ್ತಮಾಡುವುದು.
5. ವಾರದಲ್ಲಿ ಒಂದು ದಿನವಾದರೂ ಹತ್ತಿರದ ದೇವಾಲಯಕ್ಕೆ ಅಥವಾ ಆಶ್ರಮಕ್ಕೆ ಹೋಗುವುದು
6. ವರ್ಷಕ್ಕೆ ಒಮ್ಮೆಯಾದರೂ ಒಂದು ಪುಣ್ಯಕ್ಷೇತ್ರಕ್ಕೆ ತೀರ್ಥಯಾತ್ರೆ ಮಾಡುವುದು
7. ಪ್ರಮುಖವಾದ ಹಬ್ಬಗಳನ್ನು ಭಕ್ತಿಯಿಂದ ಆಚರಿಸುತ್ತಾ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು
8. ನಿಮ್ಮ ಹುಟ್ಟುಹಬ್ಬ, ವಾರ್ಷಿಕೋತ್ಸವ, ಪಾಠಶಾಲೆ/ಉದ್ಯೋಗದ ಮೊದಲ ದಿನ, ಪರೀಕ್ಷೆಗೆ ಮುನ್ನ – ಇಂತಹ ವಿಶೇಷ ದಿನಗಳಲ್ಲಿ ಹತ್ತಿರದ ದೇವಾಲಯ/ಆಶ್ರಮಕ್ಕೆ ಹೋಗುವುದು
9. ಶಾಸ್ತ್ರೀಯ ಸಂಗೀತ, ಭಜನೆ, ಶ್ಲೋಕಗಳನ್ನು ಕಲಿಯುವುದು

ಮುಂದಿನ ಹೆಜ್ಜೆ

ಮನಸ್ಸು ತಕ್ಕಮಟ್ಟಿಗೆ ಶುದ್ಧವಾದ ನಂತರ ಗುರುವನ್ನು ಸಮೀಪಿಸಿ ಅವರ ಸೇವೆಮಾಡುವುದು. ಅವರಿಂದ ಕ್ರಮಬದ್ಧವಾಗಿ ಶಾಸ್ತ್ರಾಧ್ಯಯನ ಮಾಡಿ ಜೀವ-ಈಶ್ವರಸಂಬಂಧದ ಜ್ಞಾನವನ್ನು ಪಡೆಯುವುದು (೪.೨೩). ಆ ಜ್ಞಾನದ ಮೂಲಕ ಆನಂದವೆ ನಿಮ್ಮ ನಿಜ ಸ್ವರೂಪವೆಂದು, ವಸ್ತು-ವ್ಯಕ್ತಿ-ಪರಿಸ್ಥಿತಿಗಳ ಮೇಲೆ ಅವಲಂಬಿತವಲ್ಲವೆಂದು ದೃಢವಿಶ್ವಾಸ ಪಡೆಯುವುದು. ಅದು ನಿಮ್ಮ ಪೂರ್ಣತ್ವವನ್ನು ನಿಮಗೆ ಸಿಗುವಂತೆ ಮಾಡುತ್ತದೆ.

ಈ ವಿಷಯವನ್ನು ಇನ್ನೂ ವಿವರವಾಗಿ ತಿಳಿಯಲು ಬಯಸಿದಲ್ಲಿ Gitaa Saaram – Essence of the Gita ಮತ್ತು Tenets of Hinduism ಎಂಬ ಹೆಸರಿನ ಪುಸ್ತಕಗಳನ್ನು ಓದಬಹುದು. ಈ ಪುಸ್ತಕಗಳು ಕೆಳಗಿನ ಅಂತರ್ಜಾಲತಾಣದಲ್ಲಿ ಲಭ್ಯವಿದೆ: http://practicalphilosophy.in/elibrary

ಶ್ರೀ ಕೃಷ್ಣಾರ್ಪಣಮಸ್ತು